ಮ್ಯಾಗ್ನಟೈಟ್
ಕಬ್ಬಿಣದ ಪ್ರಮುಖ ಅದುರು. ಗ್ರೀಸಿನ ಮ್ಯಾಗ್ನೆಸ್ ಎಂಬುವ ಬೆಟ್ಟದ ತಪ್ಪಲೊಂದರಲ್ಲಿ ದನ ಮೇಯಿಸುತ್ತಿದ್ದಾಗ ಅವನ ಬೂಟಿನ ತಳದ ಮೊಳೆಗಳು ಮತ್ತು ಕೋಲಿನ ಕಬ್ಬಿಣದ ಉಂಗುರ ಅಲ್ಲಿದ್ದ ಕಪ್ಪು ಶಿಲೆಯೊಂದರಿಂದ ಆಕರ್ಷಿತವಾಯಿತಾದ ಕಾರಣ ಇದಕ್ಕೆ ಮ್ಯಾಗ್ನಟೈಟ್ ಎಂಬ ಹೆಸರು ಬಂದಿತೆಂಬುದು ಒಂದು ಊಹೆ.  ಇದು ಅಯಸ್ಕಾಂತದಿಂದ ಆಕರ್ಷಿತಗೊಳ್ಳುವ ವಿಶೇಷಗುಣ ತಳೆದಿದೆ.  ಇದರ ಕೆಲವು ಮಾದರಿಗಳು ನೈಸರ್ಗಿಕ ಸೂಜಿಗಲ್ಲು (ಲೋಡ್‍ಸ್ಟೋನ್) ಎನಿಸಿವೆ. ಪುರಾತನಕಾಲದ ನಾವಿಕರು, ಪ್ರಯಾಣಿಕರು, ಇದನ್ನು ಉತ್ತರಮುಖಿ ಅಥವಾ ದಿಕ್ಸೂಚಿಯಾಗಿ ಬಳಸುತ್ತಿದ್ದ ಬಗ್ಗೆ ದಾಖಲೆಗಳಿವೆ.
ಇದರ ರಾಸಾಯನಿಕ ಸಂಯೋಜನೆ ಈe3ಔ4.  ಖನಿಜದ ಹರಳುಗಳ ಐಸೊಮೆಟ್ರಿಕ್ ವರ್ಗದವು.  ಹಲವು ವೇಳೆ ವಿವಿಧ ಗಾತ್ರದ ಅಷ್ಟಮುಖಿ ಹಾಗೂ ದ್ವಾದಶಮುಖಿ ಹರಳುಗಳೂ ಇರುತ್ತವೆ.  ಕೆಲವು ಬಗೆಯ ಅವಳಿ ಹರಳುಗಳೂ ಉಂಟು. ಮ್ಯಾಗ್ನಟೈಟ್ ತೆಳುಪದರಗಳಂತೆ, ಸೂಕ್ಷ್ಮ ಹಾಗೂ ದಪ್ಪ ಕಣಗಳಂತೆ ಅಥವಾ ಅಮೂರ್ತ ಸ್ವರೂಪದ ಮುದ್ದೆಗಳಂತೆ ಕಂಡುಬರುವುದುಂಟು. ಅಪರೂಪÀಕ್ಕೆ ಪಾರಕ ಆಭ್ರಕದ ಹಾಳೆಗಳ ನಡುವೆ ಹುದುಗಿರುವ ಮ್ಯಾಗ್ಮಟೈಟ್ ಶೈವಲಾ ಕೃತಿಯನ್ನು ತಳೆದಿರುತ್ತದೆ. ಖನಿಜದ ಬಣ್ಣ ಕಡುಗಪ್ಪು, ಒರೆಯೂ ಅಷ್ಟೇ.  ಸೀಳುಗಳು ಅಸ್ಪಷ್ಟ.   ಒಮ್ಮೊಮ್ಮೆ ಅಷ್ಟಮುಖೀಯ ವಿಭಾಗ ಸಪಾಟಗಳನ್ನು ಗುರುತಿಸಲು ಸಾಧ್ಯ.  ಅಸ್ಪಷ್ಟ ಚಿಪ್ಪಿನಾಕಾರದ ಬಿರಿತ, ಲೋಹದಂತೆ ಮಿರುಗುವ ಹೊಳಪು ಇದ್ದು ಒಮ್ಮೊಮ್ಮೆ ಫಳ ಫಳಿಸುತ್ತದೆ.  ಕೆಲವೊಮ್ಮೆ ಕಾಂತಿಹೀನವಾಗಿರುವುದೂ ಉಂಟು. ಕಾಠಿಣ್ಯಾಂಕ 5.5-6.5. ಕಷ್ಟಪಟ್ಟು ಚಾಕುವಿನಿಂದ ಗೀರುವುದು ಸಾಧ್ಯವಾಗಬಹುದು.  ಸಾಕಷ್ಟು ಭಾರದ ಖನಿಜ; ಸಾಪೇಕ್ಷ ಸಾಂದ್ರತೆ ಸುಮಾರು 5.16.  ಇದು ಖನಿಜದ ಮುಖ್ಯ ಲಕ್ಷಣವೂ ಹೌದು.  ಖನಿಜವನ್ನು 5500 ಉಷ್ಣತೆಗೆ ಕಾಸಿದಾಗ ಈ ವಿಶಿಷ್ಟ ಗುಣ ಕಳೆದುಹೋಗುತ್ತದೆ.  ಇಂಥ ಗುಣರಹಿತ ಖನಿಜ ಕೇವಲ ಕಬ್ಬಿಣದ ಅದುರಿನಂತೆ ಆಗುತ್ತದೆ.  ಈ ಅದುರಿಗೆ ಹಿಮಟೈಟ್ ಎಂದು ಹೆಸರು.  ಇದು ಭಿದುರ ಗುಣವುಳ್ಳದ್ದು.

ಮ್ಯಾಗ್ನಟೈಟ್ ಭೂಹೊರಚಿಪ್ಪಿನ ಅಗ್ನಿಶಿಲೆ, ಸಂಚಿತಶಿಲೆ ಮತ್ತು ರೂಪಾಂತರಶಿಲೆ ಎಂಬ ಮೂರು ಬಗೆಗಳಲ್ಲಿ ವಿವಿಧ ಪ್ರಮಾಣದಲ್ಲಿ ದೊರೆಯುತ್ತದೆ.  ಅಗ್ನಿಶಿಲೆಗಳಲ್ಲಿ ಬಲುಮಟ್ಟಿಗೆ ಅತ್ಯಲ್ಪ ಪ್ರಮಾಣದ ಉಪರಿ (ಆಕ್ಸೆಸೊರಿ) ಖನಿಜವೆನಿಸಿದೆ.  ಅದರ ಒಮ್ಮೊಮ್ಮೆ ಪ್ರತ್ಯಾಮ್ಲೀಯ ಶಿಲೆಗಳಲ್ಲಿ ಇದರ ಸಾಕಷ್ಟು ದೊಡ್ಡ ನಿಕ್ಷೇಪಗಳನ್ನು ಕಾಣಬಹುದು.  ಹಲವು ವೇಳೆ ಟೈಟೇನಿಯಮ್ ಹಾಗೂ ವೆನೇಡಿಯಮ್ ಧಾತುಗಳಿಂದ ಕೂಡಿ ಪ್ರಮುಖ ಅದುರು ನಿಕ್ಷೇಪವೆನಿಸುತ್ತದೆ. ಉಲ್ಕಾಪಿಂಡಗಳಲ್ಲೂ ಮ್ಯಾಗ್ನಟೈಟ್ ಇರುವುದು ತಿಳಿದುಬಂದಿದೆ.

ಸಂಚಿತ ಶಿಲಾವರ್ಗದ ಮೆಕ್ಕಲು ನಿಕ್ಷೇಪಗಳಲ್ಲಿಯೂ ಕಡಲಕರೆಯ ಮರಳು ನಿಕ್ಷೇಪಗಳಲ್ಲಿಯೂ ಕಪ್ಪು ಬಣ್ಣದ ಮ್ಯಾಗ್ನಟೈಟ್ ಕಣಗಳಿರುತ್ತವೆ.  ರೂಪಾಂತರ ಶಿಲೆಗಳಾದ ಸ್ತರೀ ಮ್ಯಾಗ್ನಟೈಟ್ ಕಾಟ್ರ್ಸೈಟ್‍ಗಳ ಮುಖ್ಯ ಘಟಕ ಮ್ಯಾಗ್ನಟೈಟ್.

ಪ್ರಪಂಚದ ಅತ್ಯುತ್ತಮವೆನಿಸಿದ ಹಾಗೂ ಬಲು ವಿಸ್ತಾರವಾದ ಮ್ಯಾಗ್ನಟೈಟ್ ನಿಕ್ಷೇಪಗಳು ಸ್ವೀಡನ್ನಿನಲ್ಲಿವೆ.  ಇವು ಮೂಲ ಶಿಲಾದ್ರವಜನ್ಯ (ಮ್ಯಾಗ್ಮಾಟಿಕ್) ಬಗೆಯವು ಎನ್ನಲಾಗಿದೆ.  ನಾರ್ವೆಯಲ್ಲಿ ಸ್ತರೀ ಸ್ವರೂಪದ ರೂಪಾಂತರ ಅದುರು ನಿಕ್ಷೇಪಗಳಿವೆ.  ಉತ್ತಮ ದರ್ಜೆಯ ಮ್ಯಾಗ್ನಟೈಟ್ ಅದುರು ನಿಕ್ಷೇಪಗಳನ್ನು ರೊಮೇನಿಯ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳ ಅಡಿರೋಂಡ್ಯಾಕ್ ಪ್ರದೇಶಗಳಲ್ಲಿ ಕಾಣಬಹುದು. ರಷ್ಯ ಮತ್ತು ಕೆನಡಗಳಲ್ಲೂ ನಿಕ್ಷೇಪಗಳಿವೆ. ಭಾರತದಲ್ಲಿ ಬೃಹದಾಕಾರದ, ಸಾಕಷ್ಟು ಉತ್ತಮದರ್ಜೆಯ ಮ್ಯಾಗ್ನಟೈಟ್ ಅದುರಿನ ನಿಕ್ಷೇಪಗಳು ಪಶ್ಚಿಮ ಘಟ್ಟಗಳ ಕುದುರೆಮುಖ ಶ್ರೇಣಿಯಲ್ಲಿವೆ.  ಅಲ್ಲಿ ಬೃಹತ್ ಪ್ರಮಾಣದಲ್ಲಿ ಗಣಿಗಾರಿಕೆ ನಡೆದಿದೆ.  ವೆನೇಡಿಯಮ್ ಅಂಶದಿಂದ ಕೂಡಿದ ಟೈಟಾನಿಫೆರಸ್ ಮ್ಯಾಗ್ನಟೈಟ್ ನಿಕ್ಷೇಪಗಳು ಹಾಸನ ಜಿಲ್ಲೆಯ ನುಗ್ಗೇಹಳ್ಳಿ, ತಗಡೂರು, ಭಕ್ತರಹಳ್ಳಿ, ಬೆಳಗುಂಬ, ಅಜ್ಜನ ಹಳ್ಳಿ, ಶಿವಮೊಗ್ಗ ಜಿಲ್ಲೆಯ ಉಬ್ರಾಣಿ, ದೇವರನರಸೀಪುರ ಮತ್ತು ಸಕ್ರೆಬೈಲು; ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‍ರಾಕ್‍ನ ಸಂತೇಪೇಟೆ ಮತ್ತು ಮೂಲೆಮನೆ ಪ್ರದೇಶಗಳಲ್ಲಿವೆ.

ಒರಿಸ್ಸದ ಮಯೂರ್‍ಭಂಜ್ ಮತ್ತು ಬಾಲಸರೂ ಜಿಲ್ಲೆಗಳ ಗಡಿಪ್ರದೇಶ ಸುನ್ಲಿಪಟ್ ಸಮೀಪದಲ್ಲಿ ಅತ್ಯುತ್ತಮವಾದ ಮ್ಯಾಗ್ನಟೈಟ್ ನಿಕ್ಷೇಪಗಳು ಇವೆ.  ತಮಿಳುನಾಡಿನ ಸೇಲಮ್ ಮತ್ತು ತಿರುಚಿರಾಪಳ್ಳಿ ಜಿಲ್ಲೆಗಳ ಕುಂಜಮಲೈ, ಚಿಟ್ಟೇರಿ, ಗೊಂಡಮಲೈ, ಕೊಲ್ಲೈಮಲೈ ಮತ್ತು ತೀರ್ಥಮಲೈ ಬೆಟ್ಟಗಳಲ್ಲಿ ಸಾಕಷ್ಟು ಮೊತ್ತದ ಮ್ಯಾಗ್ನಟೈಟ್ ಅದುರು ದೊರೆಯುತ್ತದೆ.		  
 (ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ